ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ
ಮುರಿದು ಹೋಯಿತೆ ಈಗ ಆ ಪುಟ್ಟ ಗೂಡು ||ತಪ್ಪಿ ಹೋಯಿತಲ್ಲೇ||
ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ
ಹರಿದು ಚೂರಾಯಿತೆ ಎದೆಯ ಒಲವಿನ ಬೀಡು
ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ
ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು ||ತಪ್ಪಿ ಹೋಯಿತಲ್ಲೇ||
ಎಲ್ಲಿ ಹೋಯಿತು ವಲಸೆ ಗೂಡು ತೊರೆದ ಹಕ್ಕಿ
ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ನಾಡು
ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ
ಮುಂದೆ ಬಯಲು, ಹಿಂದೆ ಬಿದ್ದೀತು ಕಾಡು ಮೇಡು
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ
ಮುರಿದು ಹೋಯಿತೆ ಈಗ ಆ ಪುಟ್ಟ ಗೂಡು
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು...!!