ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು |
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು
ಸೂಸಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕಚ್ಚೇವು
ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡೆಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ
ಕರುನಾಡಿನವರಿವ ನೆರೆತೀವಿ ಭಾವದಲಿ
ಜೀವನಾಡಿ ನುಡಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು, ಕನ್ನಡರ ಬಲವು ಕನ್ನಡದ ಒಲವು -ಹಿಡಿನೆನವು
ನಮ್ಮದೆಯ ಕೆಚ್ಚುನೆಚ್ಚುಗಳನೂಡಿ ಹಚ್ಚೇವು ಕನ್ನಡದ ದೀಪ
ನಮ್ಮವರು ಗಳಿಸಿದಾ ಹೆಸರ ಉಳಿಸಲೆಲ್ಲಾರು ಒಂದುಗೂಡೇವು
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ, ಕಡೆದೇವು ಇರುಳ ಪಡೆದೇವು ತಿರುಳ -ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.