ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು! ||ಪ||
ಗಾನವ ಬೆರೆಯಿಸಿ..ವೀಣೆಯ ದನಿಯೊಳು
ವಾಣಿಯ ನೇವುರ..ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೋ
ಎನಿತು ಇನಿದು ಈ ಕನ್ನಡ ನುಡಿಯು !||೧||
ರಂಗನ ಮುರಲಿಯ..ಹಿಂಗದ ಸರದಲಿ
ಹೆಂಗಳೆಯರು ಬೆಳದಿಂಗಳಿರುಳಲಿ
ಸಂಗೀತವನೊರೆದಂಗವಿದೇನೋ
ಎನಿತು ಇನಿದು ಈ ಕನ್ನಡ ನುಡಿಯು!||೨||
ಗಿಳಿಗಳು ಉಲಿಯುವ ಮೆಲುಮಾತುಗಳೋ
ಕಳಕಂಠಗಳಾ ಚೆಲುವಿನ ಕುಕಿಲೊ
ಅಳಿಗಳ ಬಳಗದ ಬೆಳಗಿನ ಉಲಿಯೋ
ಎನಿತು ಇನಿದು ಈ ಕನ್ನಡ ನುಡಿಯು!||೩||